ನವಾಬರು, ಅಯೋಧ್ಯೆಯ -
ಔಧ್ ಅಥವಾ ಅವಧ ಎಂದು ಪ್ರಖ್ಯಾತವಾಗಿದ್ದ ಅಯೋಧ್ಯೆಯಲ್ಲಿ (ನೋಡಿ- ಅವಧ) 18-19ನೆಯ ಶತಮಾನಗಳಲ್ಲಿ ಆಳುತ್ತಿದ್ದ ನವಾಬರು. ಇದು ಮೊದಲು ಮೊಗಲ್ ಸಾಮ್ರಾಜ್ಯದ ಒಂದು ಮುಖ್ಯವಾದ ಸುಬಾ ಆಗಿತ್ತು. ಔಧ್ ರಾಜ್ಯದ ಸ್ಥಾಪಕ ಸಾದತ್ ಖಾನ್ (1722-1739) ಖುರಾಸಾನ್‍ನಿಂದ ಬಂದವನು. 1724ರಲ್ಲಿ ಔಧ್‍ನ ರಾಜ್ಯಪಾಲನಾಗಿ ನೇಮಕ ಹೊಂದಿದ ಈತ ಬಲು ಬೇಗ ಮೇಲಕ್ಕೆ ಏರಿದ. ನಾದಿರನ ಆಕ್ರಮಣದ ಕಾಲದಲ್ಲಿ (1739) ಇವನು ದೆಹಲಿಗೆ ಆಹ್ವಾನಿತನಾಗಿದ್ದ. ಅದೇ ವರ್ಷ ಇವನು ಆತ್ಮಹತ್ಯೆ ಮಾಡಿಕೊಂಡ. ಅನಂತರ ರಾಜ್ಯಪಾಲನಾದವನು ಸಾದತ್ ಖಾನನ ಸೋದರಳಿಯ ಹಾಗೂ ಅಳಿಯ ಸಫ್ದರ್ ಜಂಗ್ (1739-1754). ಈತ ದೆಹಲಿ ಚಕ್ರಾಧಿಪತ್ಯದ ವಜೀರನಾಗಿ ನೇಮಕ ಹೊಂದಿದ್ದ (1748). ಸಫ್ದರ್ ಜಂಗ್ ತನ್ನ ಸಮಕಾಲೀನ ರಾಜಕೀಯದಲ್ಲಿ ಮಹತ್ತರ ಪಾತ್ರವಹಿಸಿದ್ದ. ಈತ 1754ರಲ್ಲಿ ಮರಣ ಹೊಂದಿದ. ಸಫ್ದರ್ ಜಂಗನ ಮರಣದ ಅನಂತರ ಸಿಂಹಾಸನಕ್ಕೆ ಬಂದ ಅವನ ಮಗ ಶೂಜಾ-ಉದ್-ದೌಲ (1754-1775) ಕ್ಷೀಣದೆಸೆಯಲ್ಲಿದ್ದ ಮೊಗಲ್ ಆಡಳಿತದಲ್ಲಿ ವಜೀರನಾಗಿದ್ದ. 1775ರಲ್ಲಿ ತನ್ನ ಕೊನೆಯುಸಿರೆಳೆಯುವತನಕ ಈ ಅಧಿಕಾರದಲ್ಲಿ ಮುಂದುವರಿದ ಈತ ಉತ್ತರ ಭಾರತದ ಇತಿಹಾಸದ ಪ್ರಮುಖ ವ್ಯಕ್ತಿಗಳಲ್ಲೊಬ್ಬ.

    	ಶೂಜಾ-ಉದ್-ದೌಲ 1763ರಲ್ಲಿ ಮೊಗಲ್ ಚಕ್ರವರ್ತಿ ಮತ್ತು ಮೀರ್ ಕಾಸಿಂನೊಂದಿಗೆ ಕೂಡಿಕೊಂಡು ಬಕ್ಸರ್ ಎಂಬಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ (1764). ಆದರೆ ಪರಾಜಿತನಾಗಿ ಅವನು ಅವಹೇಳನಕರವಾದ ಕರಾರಿಗೆ ಒಪ್ಪಬೇಕಾಯಿತು. ಆದಾಗ್ಯೂ ಆತನ ರಾಜಕೀಯ ದೂರದೃಷ್ಟಿಯಿಂದಾಗಿ ಅವನು ಪೂರ್ಣವಾಗಿ ನಾಶವಾಗದೆ ಉಳಿದುಕೊಂಡ. ಚಾಣಾಕ್ಷತೆ ಮತ್ತು ಕುಶಲ ಆಡಳಿತ ನೀತಿಯಿಂದ ಅವನು ಬ್ರಿಟಿಷರ ಸ್ನೇಹವನ್ನು ಸಂಪಾದಿಸಿಕೊಂಡು ತನ್ನ ಸ್ಥಾನವನ್ನು ಉಳಿಸಿಕೊಂಡ. ಇಂಗ್ಲಿಷರಿಗೂ ಔಧ್ ನವಾಬನೊಂದಿಗೆ ಸ್ನೇಹ ಬೇಕಾಗಿತ್ತು. ಮರಾಠರು ಮತ್ತು ಆಫ್ಘನ್ನರ ವಿರುದ್ಧ ರಕ್ಷಣೆಗೆ ಅವನನ್ನು ಅವರು ಬಳಸಿಕೊಂಡರು. 1765ರ ಇಂಗ್ಲಿಷ್-ಔಧ್ ಕೌಲಿನ ಹಿಂದೆ ಈ ಉದ್ದೇಶವಿತ್ತು. 1770-71ರಲ್ಲಿ ದೆಹಲಿಯ ಚಕ್ರವರ್ತಿ 2ನೆಯ ಶಾಹ ಆಲಮ್ ಮರಾಠರ ಆಶ್ರಯ ಪಡೆದಾಗ ಇಂಗ್ಲಿಷರು ಕೋರಾ ಮತ್ತು ಅಲಹಾಬಾದ್ ಜಿಲ್ಲೆಗಳನ್ನು ಅವನಿಂದ ಕಿತ್ತುಕೊಂಡು ಅವನ್ನು ನವಾಬನಿಗೆ ಕೊಟ್ಟರು. ಇದಕ್ಕೆ ಪ್ರತಿಯಾಗಿ ನವಾಬನಿಂದ ರೂ. 50 ಲಕ್ಷ ಪಡೆದುಕೊಂಡರು. ಜೊತೆಗೆ ನವಾಬನ ರಕ್ಷಣೆಗಾಗಿ ಕಂಪನಿಯ ಸೈನಿಕ ಠಾಣೆಯನ್ನು ಅಲ್ಲಿ ಇಟ್ಟು, ಅದಕ್ಕಾಗಿ ಅವನು ವಾರ್ಷಿಕ ಪೊಗದಿ ಕೊಡಬೇಕೆಂದು ಕರಾರು ಮಾಡಿದರು. 1773ರಲ್ಲಿ ಬನಾರಸ್ ಕೌಲಿನಲ್ಲಿ ಇದಕ್ಕೆ ಸ್ವೀಕಾರಮುದ್ರೆ ಬಿತ್ತು. 1774ರಲ್ಲಿ ಇಂಗ್ಲಿಷರ ಮತ್ತು ನವಾಬನ ಸೈನ್ಯಗಳು ರೋಹಿಲ್‍ಖಂಡವನ್ನು ವಶಪಡಿಸಿಕೊಂಡವು. ಸ್ವಲ್ಪ ಭಾಗ ಬಿಟ್ಟು ಉಳಿದ ಪ್ರದೇಶವನ್ನು ನವಾಬ್ ಶೂಜಾ-ಉದ್-ದೌಲನಿಗೆ ಕೊಡಲಾಯಿತು.

    	ಶೂಜಾ-ಉದ್-ದೌಲ ಬಲಶಾಲಿಯೂ ರಾಜತಂತ್ರನಿಪುಣನೂ ತೀಕ್ಷ್ಣಬುದ್ಧಿಯುಳ್ಳವನೂ ಉತ್ಸಾಹಶಾಲಿಯೂ ಆಗಿದ್ದ. ಆತ ತನ್ನ ಕರ್ತವ್ಯನಿಷ್ಠೆಯಿಂದ ಅಯೋಧ್ಯೆಯ ಸ್ವಾತಂತ್ರ್ಯವನ್ನೂ ತನ್ನ ವಂಶದ ಗೌರವವನ್ನೂ ಕಾಪಾಡಿಕೊಂಡಿದ್ದ. ಆದರೆ ಶೂಜಾ-ಉದ್-ದೌಲನ ಅನಂತರ ಅಧಿಕಾರಕ್ಕೆ ಬಂದ ಅನೇಕ ನವಾಬರು ದುರ್ಬಲರೂ ಅಸಮರ್ಥರೂ ಆಗಿದ್ದರು. ಇದರ ಪರಿಣಾಮವಾಗಿ ಅಯೋಧ್ಯೆಯ ಆಡಳಿತ ವ್ಯವಹಾರಗಳಲ್ಲಿ ಬ್ರಿಟಿಷರ ಪ್ರಾಬಲ್ಯ ಹೆಚ್ಚಿ ಕೊನೆಗೆ ಅಯೋಧ್ಯೆ ಬ್ರಿಟಿಷ್ ಸಾಮ್ರಾಜ್ಯದಲ್ಲಿ ಸೇರಿಹೋಗಲು ಅವಕಾಶವಾಯಿತು.

    	ಶೂಜಾ-ಉದ್-ದೌಲನ ತರುವಾಯ ಅಸಫ್-ಉದ್-ದೌಲ (1775-1797) ಸಿಂಹಾಸನಕ್ಕೆ ಬಂದ. ಈತ ದುರ್ಬಲ ಹಾಗೂ ಯೋಗ್ಯನಲ್ಲದ ದೊರೆಯಾಗಿದ್ದ. ಈತನ ಕಾಲದಲ್ಲಿ ಆಡಳಿತ ವ್ಯವಸ್ಥೆ ಬೇಜವಾಬ್ದಾರಿಯದೂ ಕಳಂಕಪೂರಿತವೂ ಆಗಿತ್ತು. ಬೇಗಮರ ಸ್ವಂತ ಆಸ್ತಿಯಲ್ಲಿ ಗವರ್ನರ್-ಜನರಲ್ ವಾರ್‍ನ್ ಹೇಸ್ಟಿಂಗ್ಸ್ ಕೈಹಾಕಲು ಇದು ಪ್ರೋತ್ಸಾಹ ನೀಡಿತು. ನವಾಬ ತನ್ನ ಹೇಯಕೃತ್ಯಕ್ಕಾಗಿ ಕೆಟ್ಟ ಹೆಸರು ಗಳಿಸಿದ. 1794ರಲ್ಲಿ ಅಸಫ್-ಉದ್-ದೌಲನ ವಜೀರ ಹೈದರ್ ಬೇಗ್ ಮರಣ ಹೊಂದಿದಾಗ ಉತ್ತಮ ಆಡಳಿತ ವ್ಯವಸ್ಥೆಯ ಎಲ್ಲ ಆಶೆಗಳೂ ಮಣ್ಣುಪಾಲಾದುವು.

    	ಅಸಫ್-ಉದ್-ದೌಲ 1797ರಲ್ಲಿ ಮರಣಹೊಂದಿದ ಮೇಲೆ ವಾಜೀóರ್ ಅಲಿ ಮತ್ತು ಸಾದತ್ ಅಲಿ ನಡುವೆ ಉತ್ತರಾಧಿಕಾರಕ್ಕಾಗಿ ಜಗಳವುಂಟಾಯಿತು. 1797ರಲ್ಲಿ ಸಿಂಹಾಸನವೇರಿದ ವಾಜೀóರ್ ಅಲಿಯನ್ನು ಸಾದತ್ ಅಲಿ ಗವರ್ನರ್ ಜನರಲ್ ಸರ್ ಜಾನ್ ಶೋರನ ಸಹಾಯದಿಂದ ಕೆಳಗಿಳಿಸಿ (1798) ಅಯೋಧ್ಯೆಯ ನವಾಬನಾದ. ವಾಜೀóರ್ ಅಲಿಗೆ ನಿವೃತ್ತಿವೇತನವನ್ನು ನೀಡಿ ಬನಾರಸ್‍ಗೆ ಕಳುಹಿಸಲಾಯಿತು. ಇಂಗ್ಲಿಷರು ಅನೇಕ ಷರತ್ತುಗಳನ್ನು ಹೇರಿ ನವಾಬನೊಂದಿಗೆ ಒಪ್ಪಂದ ಮಾಡಿಕೊಂಡರು. ನವಾಬನ ಸ್ವಾತಂತ್ರ್ಯ ಕಳೆದುಹೋಯಿತು. ಅಯೋಧ್ಯೆಯನ್ನು ಬ್ರಿಟಿಷರ ನೇರ ಹತೋಟಿಗೆ ಒಳಪಡಿಸುವುದು ಗವರ್ನರ್-ಜನರಲ್ ಲಾರ್ಡ್ ವೆಲ್‍ಸ್ಲಿಯ ಹಂಚಿಕೆಯಾಗಿತ್ತು. ವೆಲ್‍ಸ್ಲಿ ಬನಾರಸ್ ದಂಗೆಯ ನೆವವನ್ನು ಮುಂದುಮಾಡಿ, ನವಾಬ ತನ್ನ ಸೈನ್ಯವನ್ನು ವಿಸರ್ಜಿಸಿ ಬ್ರಿಟಿಷರ ಸೈನ್ಯದ ಬಲವನ್ನು ಹೆಚ್ಚಿಸುವಂತೆ ಬಲಾತ್ಕರಿಸಿದ. ಈ ಸಂಬಂಧವಾಗಿ ನವಾಬನೊಂದಿಗೆ ಒಂದು ಒಪ್ಪಂದ ಮಾಡಿಕೊಂಡ. ನವಾಬ 1801ರಲ್ಲಿ ತನ್ನ ರಾಜ್ಯದ ಅರ್ಧಭಾಗವನ್ನು ಬ್ರಿಟಿಷರಿಗೆ ಬಿಟ್ಟುಕೊಡಬೇಕಾಯಿತು. ವೆಲ್‍ಸ್ಲಿ ಅನಂತರ ನವಾಬನೊಂದಿಗೆ ಮಾಡಿಕೊಂಡ ಒಪ್ಪಂದಗಳಿಂದಾಗಿ ಲಾರ್ಡ್ ಡಾಲ್‍ಹೌಸಿ 1856ರಲ್ಲಿ ಅಯೋಧ್ಯೆಯನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ಸೇರಿಸಿಕೊಳ್ಳಲು ಅಡಿಪಾಯ ನಿರ್ಮಿತವಾಯಿತು.    

   	ಘಾಸಿ-ಉದ್-ದೇನ್ ಹೈದರನ (1814-1827) ಆಳ್ವಿಕೆಯ ಕಾಲದಲ್ಲಿ ದೆಹಲಿ ಮತ್ತು ಅಯೋಧ್ಯೆಯ ನಡುವಿನ ಎಲ್ಲ ಸಂಬಂಧಗಳೂ ಕಡಿದುಹೋದವು. ನಾಸಿರ್-ಉದ್-ದೀನ್ ಹೈದರ್ (1827-1837), ಮಹಮ್ಮದ್ ಅಲಿ ಶಾಹ (1837-1842) ಇವರು ಆಡಳಿತವನ್ನು ಸುಧಾರಿಸಲು ಏನನ್ನೂ ಮಾಡಲಿಲ್ಲ. ಪರಿಸ್ಥಿತಿ ಹದಗೆಟ್ಟು, ಎಲ್ಲೆಲ್ಲೂ ಗೊಂದಲಮಯ ವಾತಾವರಣ ಉಂಟಾಯಿತು. ಬ್ರಿಟಿಷರು ನೇರ ಕ್ರಮ ಕೈಗೊಳ್ಳಲು ಇದರಿಂದ ಉತ್ತಮ ಅವಕಾಶ ಒದಗಿಬಂತು. ಅತ್ಯಂತ ಶೀಘ್ರವಾಗಿ ಬೆಳೆಯುತ್ತಿದ್ದ ಬ್ರಿಟಿಷ್ ಸಾಮ್ರಾಜ್ಯದ ನಡುವೆ ಇದ್ದ ಅಯೋಧ್ಯೆ ಸಂಪೂರ್ಣ ಅಸ್ಥಿರತೆಗೆ ಒಳಗಾಯಿತು. ಅದು ಅಳಿದುಹೋಗುವ ಸ್ಥಿತಿಯಲ್ಲಿತ್ತು. ದುರಾಡಿಳಿತದ ನೆವವನ್ನು ಒಡ್ಡಿ ಇಂಗ್ಲಿಷ್ ಈಸ್ಟ್ ಇಂಡಿಯ ಕಂಪನಿಯ ನಿರ್ದೇಶಕರ ಮಂಡಲಿ ಅಯೋಧ್ಯೆಯನ್ನು ಆಕ್ರಮಿಸಿಕೊಳ್ಳಲು ಅಧಿಕಾರ ನೀಡಿತು. 1856ರ ಚಳಿಗಾಲದಲ್ಲಿ ಈ ಉದ್ದೇಶವನ್ನು ಪ್ರಕಟಿಸಲಾಯಿತು. ಅಯೋಧ್ಯೆಯ ಕೊನೆಯ ನವಾಬನೂ ಅಮ್ಜದ್ ಅಲಿ ಶಾಹನ (1842-1847) ಮಗ ಹಾಗೂ ಉತ್ತರಾಧಿಕಾರಿಯೂ ಆಗಿದ್ದ ವಾಜೀದ್ ಅಲಿ ಶಾಹನನ್ನು (1847-1856) ಸಿಂಹಾಸನದಿಂದ ಇಳಿಸಿ ಅವನಿಗೆ 12 ಲಕ್ಷ ರೂಪಾಯಿಗಳ ನಿವೃತ್ತಿ ವೇತನ ನೀಡಿ ಕಲ್ಕತ್ತೆಗೆ ಕಳುಹಿಸಲಾಯಿತು. ಹೀಗೆ ಅಯೋಧ್ಯೆ ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಂಡಿತು. ಅಯೋಧ್ಯೆಯ ನವಾಬರ ಆಡಳಿತ ಕೊನೆಗೊಂಡಿತು.								
	(ಎಸ್.ವೈ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ